ಪ್ರೇಮಾನಂದ
	1636-1734 ಗುಜರಾತಿ ಭಕ್ತ ಕವಿ; ಬಡೋದೆಯ ನಿವಾಸಿ. ಮೇವಾಡ ಜಾತಿಯ ಚೌಬಿ ಸಾ ಬ್ರಾಹ್ಮಣ. ತಂದೆ ಕೃಷ್ಣರಾಮಭಟ್ಟ, ಪೌರಾಣಿಕ ವೃತ್ತಿಯಿಂದ ಜೀವನ ನಡೆಸುತ್ತಿದ್ದ. ಬಾಲ್ಯದಲ್ಲಿ ತಂದೆತಾಯಿಗಳನ್ನು ಕಳೆದುಕೊಂಡು ಚಿಕ್ಕಮ್ಮನ ಪಾಲನೆ ಪೋಷಣೆಯಲ್ಲಿ ಬೆಳೆದ. ತಂದೆಯ ವೃತ್ತಿಯೇ ಈತನಿಗೂ ದೊರೆಯಿತು. 15ನೆಯ ವಯಸ್ಸಿನಲ್ಲಿ ರಾಮಚರಣ ಹರಿಹರ ಎಂಬ ಸಂನ್ಯಾಸಿಯಿಂದ ಗುರೂಪದೇಶ ದೊರೆಯಿತು. ಅನಂತರ ಅವರೊಡನೆ ತೀರ್ಥಯಾತ್ರೆ ಹೊರಟ. ಬಡೋದೆಯಿಂದ ಸೂರತ್ತಿಗೂ ಅಲ್ಲಿಂದ ನಂದನವಾರ್‍ಗೂ ಪ್ರವಾಸ ಮಾಡಿದ. ಅಲ್ಲಿ ದೇಸಾಯಿ ಶಂಕರದಾಸರ ಕೃಪಾಪಾತ್ರನಾಗಿ ಅನೇಕ ಗ್ರಂಥಗಳನ್ನು ಬರೆದ. ರಾಜರ ಕೃಪೆಯನ್ನೂ ಪಡೆದುಕೊಂಡ. ಸಾಧು-ಸಂಗದಿಂದ ಅವನಲ್ಲಿ ವೈಷ್ಣವ ಭಾವನೆ ಜಾಗೃತಗೊಂಡಿತು. ಪರಿಣಾಮತಃ ದಶಮಸ್ಕಂಧ ಮತ್ತು ತದನಂತರ ಅವನು ರಚಿಸಿದ ಅನೇಕ ಕೃತಿಗಳಲ್ಲಿ ರಾಜಕೃಪೆಯ ಉಲ್ಲೇಖ ದೊರೆಯುವುದಿಲ್ಲ. ಕವಿ ಅನನ್ಯಭಾವದಿಂದ ರಾಮನ ಉಪಾಸಕನಾದ ಮಾಲಣನಂತೆ ಈತನೂ ಕೃಷ್ಣ ವಿಷಯಕ ಕೃತಿಗಳಲ್ಲೂ ಇಷ್ಟದೈವ ರಾಮನ ಸ್ಮರಣೆ ಮಾಡಿದ್ದಾನೆ. ಕೃಷ್ಣನನ್ನೇ ಸೀತಾಪತಿ ಎಂದು ಕರೆದಿದ್ದಾನೆ.

	ದಶಮಸ್ಕಂಧದ 53ನೆಯ ಅಧ್ಯಾಯನದ 165ನೆಯ ಕಡವದವರೆಗಿನ ಕೃತಿರಚನೆ ಇವನದು. ಶೇಷಭಾಗ ಇವನ ಶಿಷ್ಯ ಸುಂದರನದು. ಈತ ಬರೆದ ಕೃಷ್ಣಚರಿತ ಸಂಬಂಧವಾದ ಇತರ ಕೃತಿಗಳು ಇವು: ರುಕ್ಮಿಣೀಹರಣ, ರುಕ್ಮಿಣೀಹರಣ ನಾ ಸಲೋಕೋ, ಬಾಲಲೀಲಾ, ಬ್ರಿಜವೆಲಿ, ದಾಣಲೀಲಾ, ಭ್ರಮರಗೀತಾ, ಭ್ರಮರಪಚೀಸಿ, ಮಾಸ ಹಾಗೂ ಸುಧಾಮ ಚರಿತ. ಕೆ.ಕೆ. ಶಾಸ್ತ್ರೀಯವರ ಅಭಿಪ್ರಾಯದಂತೆ ಈತನ ಒಟ್ಟು ಕೃತಿಗಳ ಸಂಖ್ಯೆ 26. ಶಂಕಾರಹಿತ. 4 ನಿರ್ಣಯ ರಹಿತ ಮತ್ತು 13 ಕೃತಿಗಳ ಪಾಂಡುಲಿಪಿಗಳು ಅಪ್ರಾಪ್ಯ. ಇದಲ್ಲದೆ ಅಂಬಾಲಾಲ್ ಬುಲಾಕಿ ರಾಮಜಾನೀ 23 ಕೃತಿಗಳ ನಾಮೋಲ್ಲೇಖವನ್ನಷ್ಟೆ ಮಾಡಿದ್ದಾರೆ. ಹೀಗಾಗಿ ಈತನ ಹೆಸರಿನಲ್ಲಿ ಅನೇಕ ಕೃತಿಗಳಿವೆ. ರೋಷದರ್ಶಿಕಾ-ಸತ್ಯಭಾಮಾ ಖ್ಯಾನ, ಪಾಂಚಾಲೀ ಪ್ರಸನ್ನಾಖ್ಯಾನ ಮತ್ತು ತಪತ್ಯಾಖ್ಯಾನ - ಎಂಬ 3 ನಾಟಕಗಳು ಇವನವೆಂದು ಸಿದ್ಧಪಡಿಸಲು ಅನೇಕ ವಿದ್ವಾಂಸರು ಪ್ರಯತ್ನಿಸಿ ನಿಷ್ಪಲರಾಗಿದ್ದಾರೆ. ನಿಸ್ಸಂದೇಹವಾಗಿ ಇವನ ಕೃತಿಗಳೆ ಎಂದು ಸಿದ್ಧಪಟ್ಟವುಗಳಲ್ಲಿ ಓಖಾಹರಣ, ಅಭಿಮನ್ಯು ಆಖ್ಯಾನ, ಚಂದ್ರಹಾಸಖ್ಯಾನ, ಮದಾಲಸಾಖ್ಯಾನ, ಸುಧನ್ವಾಖ್ಯನ, ನಾಸಿಕೇತೋಖ್ಯಾನ ಮುಂತಾದ ಆಖ್ಯಾನಗಳಿವೆ. ಹುಂಡೀ, ಮಾಮೆರೂ ಹಾಗೂ ಶಾಮಲದಾಸನೋ, ವಿವಾಹ-ಇವು ನರಸಿ ಮೆಹತಾ ಅವರ ಜೀವನಕ್ಕೆ ಸಂಬಂಧಪಟ್ಟ ಮುಖ್ಯ ಘಟನೆಗಳನ್ನಾಧರಿಸಿದ ವರ್ಣನಾತ್ಮಕ ಕಾವ್ಯಗಳಾಗಿವೆ. ವಾಮನಕಥಾ, ವಿಷ್ಣುಸಹಸ್ರನಾಮ-ಇವು ವೈóಷ್ಣವ ಭಾವದ ದ್ಯೋತಕ ಕೃತಿಗಳಾಗಿವೆ. ಫುವಡನೋ ಫಜೇತೋ ಲೋಕರುಚಿಯ ಪ್ರಹಸನಾತ್ಮಕ ಕೃತಿ. ಕವಿ ತನ್ನ ಕೃತಿ ರಚನೆಗಳಿಗೆ ಮುಖ್ಯವಾಗಿ ಮಹಾಭಾರತ, ವಾಲ್ಮೀಕಿ ರಾಮಾಯಣ, ಭಾಗವತ ಪುರಾಣ ಮತ್ತು ಅನ್ಯ ಪೌರಾಣಿಕ ಸಾಹಿತ್ಯದಿಂದ ಪ್ರೇರಣೆ ಪಡೆದಿದ್ದಾನೆ. ಕಥಾಕಲ್ಪನೆಯ ಅಭೂತ ಪೂರ್ವಕ್ಷಮತೆ, ಅದ್ಭುತ ವರ್ಣನಾಶಕ್ತಿ ಇವು ಈತನ ವಿಶಿಷ್ಟಗುಣಗಳು.

	ಗುಜರಾತಿನಲ್ಲಿ ವಿವಿಧ ಋತುಗಳಲ್ಲಿ ವಾರಗಳಲ್ಲಿ ಮತ್ತು ಸಂದರ್ಭಗಳಲ್ಲಿ ಪ್ರೇಮಾನಂದನ ಕೃತಿಗಳನ್ನು ನಿಯತವಾಗಿ ಪಠನ ಮಾಡುತ್ತಾರೆ. ಇದರಿಂದ ಕವಿಯ ಲೋಕಪ್ರಿಯತೆ ವಿದಿತವಾಗುತ್ತದೆ. ಮಾಲಣ ನಾಕರ ಮುಂತಾದ ಹಿಂದಿನ ಗುಜರಾತಿ ಆಖ್ಯಾನಕಾರರು ನಿರ್ಮಾಣ ಮಾಡಿದ್ದ ಮಾರ್ಗ ಈತನ ಕೃತಿಗಳಲ್ಲಿ ಮುಂದುವರಿದಿರುವುದನ್ನೂ ಕಾಣಬಹುದು. ಆದ್ದರಿಂದ ಇವನನ್ನು ನಿರ್ವಿವಾದವಾಗಿ ಶ್ರೇಷ್ಠ ಗುಜರಾತಿ ಆಖ್ಯಾನಕಾರನೆಂದು ಹೇಳಲಾಗಿದೆ. 					    (ಎಂ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ